ಪಿಟ್ಯುಟರಿ ಗ್ರಂಥಿ   -
ಮಿದುಳ ತಳಭಾಗಕ್ಕೆ ಅಂಟಿಕೊಂಡಿರುವ ಬಟಾಣಿಕಾಳಿಗಿಂತ ಸ್ವಲ್ಪ ಹೆಚ್ಚು ದೊಡ್ಡದಾದ ನಿರ್ನಾಳ ಗ್ರಂಥಿ. ಗಾತ್ರ ಸುಮಾರು 10 ಮಿ.ಮೀ. ಉದ್ದ, 13 ಮಿ.ಮೀ. ಅಗಲ. ತೂಕ ಅರ್ಧಗ್ರಾಮ್. ಕಪಾಲದ ಸ್ಪಿನಾಯಿಡ್ ಮೂಳೆಯ ತೊಟ್ಟಿಲಲ್ಲಿ ಯಾವುದೇ ಪೆಟ್ಟಿಗೆ ಒಳಗಾಗದಂತೆ ಈ ಸಂಕೀರ್ಣ ಗ್ರಂಥಿ ಭದ್ರವಾಗಿ ಅಡಕವಾಗಿದೆ. ಇದು ಸ್ರವಿಸುವ ಹಾರ್ಮೋನುಗಳು ದೈಹಿಕ ಬೆಳೆವಣಿಗೆಯಲ್ಲಿ ಬಲು ಮುಖ್ಯ ಪಾತ್ರವಹಿಸುತ್ತವೆ. ಅಲ್ಲದೆ ಪಿಟ್ಯುಟರಿ ಗ್ರಂಥಿ ಬೇರೆ ಬೇರೆ ಭಾಗಗಳಲ್ಲಿರುವ ಅಂತಃಸ್ರಾವ ಗ್ರಂಥಿಗಳ ಸ್ರಾವವನ್ನು ನಿಯಂತ್ರಿಸಿ ದೇಹದ ಸಹಜ ಕಾರ್ಯಚಟುವಟಿಕೆಯಲ್ಲಿ ನಿರತವಾಗಿದೆ. ಈ ಕಾರಣದಿಂದ ಇದನ್ನು ನಿರ್ನಾಳ ಗ್ರಂಥಿಗಳ ಸ್ವರಮೇಳದ ನಾಯಕ ಎಂದು ಕರೆಯುವುದುಂಟು. 

ಪಿಟ್ಯುಟರಿ ಗ್ರಂಥಿ ಮಿದುಳಿನಿಂದ ಮೂಗಿಗೆ ಲೋಳೆಯಂಥ ಒಸರಿಕೆಯನ್ನು ಕೊಂಡೊಯ್ಯುತ್ತದೆಂಬ ಭಾವನೆ ಬಲು ಕಾಲದಿಂದ ಇತ್ತು. ಅದಕ್ಕಾಗಿಯೇ ಈ ಹೆಸರು (ಪಿಟ್ಯುಟ್ ಎಂದರೆ ಲೋಳೆ). ಇದು ನಿಜವಲ್ಲ. ಇಂದು ರಾಸಾಯನಿಕ ವಿಧಾನಗಳು ಮತ್ತು ಊತಕ ರಾಸಾಯನಿಕ ವಿಧಾನಗಳಿಂದ ಗ್ರಂಥಿಯನ್ನು ತಪಾಸಿಸಲಾಗಿದೆ. ಅದರ ಸ್ರಾವ ಕಾರ್ಯವನ್ನು ಖಚಿತವಾಗಿ ನಿರ್ಧರಿಸಲಾಗಿದೆ. ಇದನ್ನು ಮುಂಬದಿಯ ಮತ್ತು ಹಿಂಬದಿಯ ಹಾಲೆಗಳೆಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇವುಗಳ ಉಗಮ, ರಚನೆ ಮತ್ತು ಕಾರ್ಯಸಂಪೂರ್ಣ ಬೇರೆ ಬೇರೆ. ಇವು ಭಿನ್ನಮೂಲಗಳಿಂದ ಉದ್ಭವಿಸಿ ಒಂದೆಡೆ ಸೇರಿರುವುದಾಗಿದೆ. ಹಿಂಬದಿಯ ಹಾಲೆ ನರತಂತುಗಳ ತುದಿಯ ಗಂಟಿನಂತಿದೆ. ಇದು ಹೈಪೊಥಲಾಮಸ್ಸಿನಿಂದ ಉಗಮಿಸುತ್ತದೆ. ಇದರ ಮುಂದಿರುವ ಮುಂಬದಿಯ ಹಾಲೆ ಪಿಟ್ಯುಟರಿ ಗ್ರಂಥಿಯ ಹೆಚ್ಚು ಭಾಗವನ್ನು ಆಕ್ರಮಿಸಿಕೊಂಡಿದ್ದು ನಿರ್ನಾಳ ಗ್ರಂಥಿಯ ಸಾಮಾನ್ಯ ರಚನೆಯನ್ನು ಪಡೆದಿದೆ. ಇದರಲ್ಲಿ ಎರಡು ತೆರನಾದ ಮತ್ತು ಸಾಲು ಸಾಲಾದ ಕಣಗಳಿವೆ. ಇವುಗಳ ಮಧ್ಯದಲ್ಲಿ ರಕ್ತನಾಳಗಳ ವ್ಯವಸ್ಥೆ ಉಂಟು. ಈ ಕಣಗಳ ಪೈಕಿ ಕೆಲವು ವರ್ಣದ್ವೇಷಿಗಳು (ಕ್ರೋಮೋಫೋಬ್ಸ್). ಇನ್ನು ಕೆಲವು ವರ್ಣಮೋಹಿಗಳು (ಕ್ರೋಮೋಫಿಲ್ಸ್). ಹರಳುಕಣಗಳಿಲ್ಲದ ವರ್ಣದ್ವೇಷಿ ಕಣಗಳು ಯಾವ ಹಾರ್ಮೋನನ್ನು ಸ್ರವಿಸುವುದಿಲ್ಲ. ಬಹುಶಃ ವರ್ಣಮೋಹಿ ಕಣಗಳ ಉಗಮ ಅವುಗಳಿಂದ ಆಗುತ್ತಿರಬೇಕೆಂದು ತಿಳಿಯಲಾಗಿದೆ. ಹರಳು ಕಣಗಳನ್ನು ಹೊಂದಿದ ವರ್ಣಮೋಹಿ ಕಣಗಳು ಆಮ್ಲ ಮತ್ತು ಪ್ರತ್ಯಾಮ್ಲ ವರ್ಣಗಳಿಂದ ಲೇಪನ ಪಡೆಯುವುದನ್ನು ಆಧರಿಸಿ ಅವನ್ನು ಮತ್ತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಗ್ರಂಥಿಯ ರಸಸ್ರಾವ ನೇರವಾಗಿ ರಕ್ತ ಪ್ರವಾಹಕ್ಕೆ ಬಿಡುಗಡೆಯಾಗುತ್ತದೆ.

ಗ್ರಂಥಿಯ ಮುಂಬದಿಯ ಮತ್ತು ಹಿಂಬದಿಯ ಹಾಲೆಗಳು ಅನುಕ್ರಮವಾಗಿ ರಕ್ತದ ಮೂಲಕ ಮತ್ತು ನರತಂತುಗಳ ಮೂಲಕ ಹೈಪೊಥಲಾಮಸ್ಸಿನೊಡನೆ ಸಂಪರ್ಕ ಪಡೆದಿದ್ದು ಅದರ ಅಧೀನ ವರ್ತಿಯಾಗಿ ಕಾರ್ಯ ನಿರ್ವಹಿಸುತ್ತವೆ. ಗ್ರಂಥಿ ಕಾಲಕಾಲಕ್ಕೆ ಸ್ರವಿಸುವ ಅಂಶ ರಕ್ತದ ಮೂಲಕ ಮುಂದಣ ಹಾಲೆಗೆ ತಲುಪಿ ಅಲ್ಲಿ ರಸಸ್ರಾವಕ್ಕೆ ಕಾರಣವಾಗುತ್ತದೆ. ಈ ಗ್ರಂಥಿಯನ್ನು ಹೈಪೋಥಲಾಮಸ್ಸಿನ ಸಂಪರ್ಕ ತಪ್ಪಿಸಿ ಬೇರೆ ಕಡೆ ಕಸಿ ಮಾಡಿದಲ್ಲಿ ರಸಸ್ರಾವನ ಪರಿಣಾಮಕಾರಿಯಾಗಿ ಕುಗ್ಗುತ್ತದೆ. ಗ್ರಂಥಿಯ ಮುಂದಣ ಹಾಲೆಗೆ ವಿಪುಲ ರಕ್ತಪೂರೈಕೆ ಇದೆ. ಆ ಪ್ರದೇಶದಲ್ಲಿ ರಕ್ತನಾಳಗಳ ಜಾಲವೇ ಹರಡಿದೆ. ಹೈಪೊಥಲಾಮಸ್ ಪಿಟ್ಯುಟರಿಯ ಹಾದಿಯಲ್ಲಿ ಈ ರಕ್ತನಾಳಗಳ ಹಂದರ ಉಂಟು. ಇದರ ಮೂಲಕವೇ ಹೈಪೊಥಲಾಮಸ್ಸಿಗೆ ಮುಂದಣ ಹಾಲೆಯ ಸಂಪರ್ಕ ಒದಗಿರುವುದಾಗಿದೆ. ಈ ರಕ್ತನಾಳಗಳಲ್ಲಿಯ ರಕ್ತಪರಿಚಲನೆಗೇನಾದರೂ ಭಂಗ ಉಂಟಾದಲ್ಲಿ ಪಿಟ್ಯುಟರಿಯ ಮುಂದಿನ ಹಾಲೆ ತನ್ನ ಕಾರ್ಯಸಾಮಥ್ರ್ಯವನ್ನು ಕಳೆದುಕೊಳ್ಳುತ್ತದೆ.

ಮುಂದಣ ಪಿಟ್ಯುಟರಿ : ಮುಂದಣ ಹಾಲೆಯ ಸ್ರಾವಗಳು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ದೈಹಿಕ ಬೆಳೆವಣಿಗೆ, ಲೈಂಗಿಕ ಚಟುವಟಿಕೆಗಳು, ಶರ್ಕರ, ಕೊಬ್ಬಿನ ಅಂಶಗಳ ಉಪಾಪಚಯ, ತೈರಾಯಿಡ್ ಗ್ರಂಥಿ ಮತ್ತು ಅಡ್ರಿನಲ್ ಗ್ರಂಥಿಯ ತೊಗಟೆಯ ಸ್ರಾವಗಳ ಹಾಗೂ ಹಾಲಿನ ಸ್ರಾವದ ಮೇಲೆ ಪ್ರಭಾವ ಬೀರುತ್ತದೆ. ಅದು ಸ್ರವಿಸುವ ಹಾರ್ಮೋನುಗಳ ಪೈಕಿ ಆರನ್ನು ಮುಖ್ಯವೆಂದು ಪರಿಗಣಿಸಲಾಗಿದೆ. ಬೆಳೆವಣಿಗೆಯನ್ನು ಉತ್ತೇಜಿಸುವ ಹಾರ್ಮೋನ್, ಲೈಂಗಿಕ ಗ್ರಂಥಿಗಳ ಕಾರ್ಯವನ್ನು ಪ್ರಚೋದಿಸುವ ಎರಡು ಹಾರ್ಮೋನುಗಳು, ದುಗ್ಧರಸಸ್ರಾವದ ಪ್ರೊಲ್ಯಾಕ್ಟಿನ್, ತೈರಾಯಿಡ್ ಗ್ರಂಥಿಯನ್ನೂ ಅಡ್ರಿನಲ್ ತೊಗಟೆಯನ್ನೂ ಉತ್ತೇಜಿಸುವ ಹಾರ್ಮೋನುಗಳು ಲೈಂಗಿಕ ಹಾರ್ಮೋನುಗಳನ್ನು ಬಿಟ್ಟು ಉಳಿದೆಲ್ಲವೂ ಆ್ಯಸಿಡೊಫಿಲ್ (ಆಮ್ಲದೊಲವಿನ) ಕಣಗಳಿಂದ ಸಿದ್ಧವಾಗುತ್ತವೆಂಬ ತಿಳಿವಳಿಕೆಯಿದ್ದರೂ ಅದು ಖಚಿತಪಟ್ಟಿಲ್ಲ. ತೈರಾಯಿಡ್ ಗ್ರಂಥಿ ಮತ್ತು ಅಡ್ರಿನಲ್ ತೊಗಟೆ ಉತ್ತೇಜಿಸುವ ಹಾರ್ಮೋನುಗಳು ಬೇಸೊಫಿಲ್ (ಪ್ರತ್ಯಾಮ್ಲದೊಲವಿನ) ಕಣಗಳಿಂದಲೂ ಸಿದ್ಧವಾಗುತ್ತವೆ. ಈ ಎಲ್ಲ ಹಾರ್ಮೋನುಗಳ ಬಿಡುಗಡೆಗೆ ಬೇಕಾದ ಪ್ರಚೋದನೆ ಹೈಪೊಥಲಾಮಸ್ಸಿನಿಂದ ದೊರೆಯುತ್ತದೆ. ಎಲ್ಲ ಹಾರ್ಮೋನುಗಳ ಸ್ರಾವಕ್ಕೆ ಅದು ಹೊರಹಾಕುವ ಬಿಡುಗಡೆಯ ಅಂಶಗಳ ಅಗತ್ಯವಿದ್ದು ಪ್ರೊಲ್ಯಾಕ್ಟಿನ್ನಿಗೆ ನಿಲುಗಡೆಯ ಅಂಶ ಅಗತ್ಯ. 

	ಬೆಳೆವಣಿಗೆಯ ಹಾರ್ಮೋನ್ : ಆ್ಯಸಿಡೋಫಿಲ್ ಕಣಗಳ ವಿಪುಲ ಬೆಳೆವಣಿಗೆ ಅಥವಾ ಅದರ ಗಂತಿಯ ಫಲವಾಗಿ ತೋರಿಬರುವ ಮಿತಿಮೀರಿದ ದೈಹಿಕ ಬೆಳೆವಣಿಗೆಯಿಂದಾಗಿ ಈ ಹಾರ್ಮೋನ್ ಬೆಳೆವಣಿಗೆಗೆ ಸಂಬಂಧ ಹೊಂದಿರುವುದನ್ನು ತೋರಿಸುತ್ತದೆ. ಈ ಗ್ರಂಥಿಯನ್ನು ಎಳೆತನದಲ್ಲಿ ಕತ್ತರಿಸಿ ತೆಗೆದದ್ದಾದರೆ ಅಸ್ಥಿಪಂಜರ ಮತ್ತು ಆಂತರಿಕಾಂಗಗಳ ಬೆಳೆವಣಿಗೆಗೆ ನಿಲುಗಡೆ ಆಗುತ್ತದೆ. ಈ ಹಾರ್ಮೋನ್ ಬೆಳೆವಣಿಗೆಯನ್ನು ಹೆಚ್ಚಿಸುತ್ತದೆ. ಇದು ಮೂಳೆಯ ಅಂತ್ಯ ಭಾಗ ಮತ್ತು ನಡುವಿನ ಭಂಗಗಳ ಸಂಧಿಸ್ಥಾನದಿಂದ ಚಟುವಟಿಕೆಯನ್ನು ಮುಂದುವರಿಸಿ ದೇಹದ ಎತ್ತರವನ್ನು ವೃದ್ಧಿಸುತ್ತದೆ. ಅಲ್ಲದೇ ವಿಸ್ತøತವಾಗಿ ದೇಹಭಾಗಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಇದು ಅಮೈನೋ ಆಮ್ಲಗಳಿಂದ ಪ್ರೋಟೀನ್ ಸಿದ್ಧತೆಯನ್ನು ವರ್ಧಿಸುತ್ತದೆ. ತೈರಾಕ್ಸಿನ್ ಮತ್ತು ಇನ್ಸುಲಿನ್ ಹಾರ್ಮೋನುಗಳಿಗೆ ಪೂರಕವಾಗಿ ಕಾರ್ಯಮಾಡಿ, ಉಪಾಪಚಯ ಕ್ರಿಯೆಯಲ್ಲಿ ಪಾತ್ರ ವಹಿಸುತ್ತದೆ. ದೇಹದ ಬೆಳೆವಣಿಗೆ, ಎತ್ತರ, ಗಾತ್ರ ನಿರ್ಧರಿಸುವಲ್ಲಿ ಇದರದು ನಿರ್ಣಾಯಕ ಪಾತ್ರ.

	ಲೈಂಗಿಕ ಗ್ರಂಥಿಗಳ ಪ್ರಚೋದಕ ಹಾರ್ಮೋನುಗಳು : ಮುಂದಣ ಪಿಟ್ಯುಟರಿ ಸ್ರಾವದ ಕೊರತೆ ಆದಾಗ ಇಲ್ಲವೇ ಆ ಗ್ರಂಥಿಯನ್ನು ಕತ್ತರಿಸಿ ತೆಗೆದಾಗ ಲೈಂಗಿಕ ಗ್ರಂಥಿಗಳು ಸೊರಗಿ ಹೋಗುತ್ತವೆ ಮತ್ತು ಲೈಂಗಿಕ ಚಟುವಟಿಕೆ ಕುಗ್ಗಿ ಹೋಗುತ್ತದೆ. ಇದು ಸಿದ್ಧಪಡಿಸುವ ಎರಡು ಮುಖ್ಯ ಹಾರ್ಮೋನುಗಳು ಬೀಜಕಣಗಳ ತಯಾರಿಕೆಯನ್ನು ಲೈಂಗಿಕ ಹಾರ್ಮೋನುಗಳ ಸ್ರಾವವನ್ನೂ ನಿಯಂತ್ರಿಸುತ್ತವೆ. ಇವುಗಳಿಗೆ ಸ್ತ್ರೀ ಪುರುಷ ಇಬ್ಬರಲ್ಲೂ ಸಮ ಪ್ರಭಾವ ಉಂಟು. ಅಂಡಾಶಯದ ಮೇಲೆ ಬೀರುವ ಪ್ರಭಾವದಿಂದಾಗಿ ಒಂದು ಹಾರ್ಮೋನನ್ನು ಎಫ್.ಎಸ್.ಎಚ್. ಕೋಶಿಕೋತ್ತೇಜಕ ಹಾರ್ಮೋನೆಂದು ಕರೆಯಲಾಗಿದೆ. ವ್ಯಕ್ತಿ ಯೌವನದಲ್ಲಿ ಕಾಲಿರಿಸಿದ ಬಳಿಕ ಇದು ಲೈಂಗಿಕ ಗ್ರಂಥಿಗಳ ಕಾರ್ಯವನ್ನು ಉತ್ತೇಜಿಸುತ್ತದೆ. ಸ್ತ್ರೀಯರಲ್ಲಿ ಗ್ರಾಫಿಯನ್ ಕೋಶಿಕೆಯನ್ನು ಬೆಳೆಸಿ, ಫಲವತ್ತತೆಯ ಕಾಲಾದ್ಯಂತ, ತಿಂಗಳಿಗೊಂದರಂತೆ ಅಂಡವನ್ನೂ ಅದೇ ರೀತಿ ಪುರುಷರಲ್ಲಿ ಅಧಿಕ ಮೊತ್ತದಲ್ಲಿ ವೀರ್ಯಾಣುಗಳನ್ನು ಉಂಟುಮಾಡುತ್ತದೆ. ಮತ್ತೊಂದು ಹಾರ್ಮೋನಾದ ಎಲ್. ಎಚ್. ಸ್ತ್ರೀಯಲ್ಲಿ ಪೀತಕೋಶ ಗ್ರಂಥಿಯನ್ನೂ (ಕಾರ್ಪಸ್ ಲ್ಯೂಟಿಯಮ್) ಪುರುಷರಲ್ಲಿ ಬೀಜಕೋಶದೊಳಗಿನ ಕಣಗಳ (ಐ.ಸಿ.ಎಸ್.ಎಚ್.) ಬೆಳೆವಣಿಗೆಯನ್ನೂ ಪ್ರಚೋದಿಸುತ್ತದೆ. ಐ.ಸಿ.ಎಸ್.ಎಚ್. ಎಂಬುದು ವೃಷಣದಿಂದ ಟೆಸ್ಟೊಸ್ಟಿರೋನ್ ತಯಾರಿಕೆಯನ್ನು ಪ್ರಚೋದಿಸುತ್ತದೆ. ಅಲ್ಲದೆ, ವೀರ್ಯಾಣುಗಳ ಮುಂಚಲನೆಗೆ ಅನುಕೂಲಕರವಾಗಿ ಕಾಲುವೆಗಳ ಬೆಳೆವಣಿಗೆಯನ್ನೂ ಉಂಟುಮಾಡುತ್ತದೆ. ಪಿಟ್ಯುಟರಿಯ ಈ ರಸಸ್ರಾವಗಳು ಜೀವಕಣಗಳ ಬೆಳೆವಣಿಗೆ ಮತ್ತು ಫಲವತ್ತತೆಯನ್ನು ಉಂಟುಮಾಡಿ ಜೀವದ ಉಗಮಕ್ಕೆ ಮೂಲಕಾರಣವಾಗಿವೆ.

	ಪ್ರೊಲ್ಯಾಕ್ಟಿನ್ : ಕ್ಷೀರೋತ್ಪತ್ತಿಯ ಮೇಲೆ ಪಿಟ್ಯುಟರಿಗೆ ಪ್ರಭಾವ ಇದೆ. ಈ ಗ್ರಂಥಿಗೆ ಏನಾದರೂ ಊನವಾದರೆ ಸ್ತನಗಳು ಹಾಲು ಸ್ರವಿಸವು. ಸ್ತ್ರೀ ಮೈನೆರೆಯುವ ಮೊದಲು ಸ್ತನಗಳ ಮೇಲೆ ಈ ಹಾರ್ಮೋನಿನ ಪ್ರಭಾವವೇನೂ ಇಲ್ಲ. ಆಕೆ ಯೌವನದಲ್ಲಿ ಕಾಲಿರಿಸಿದ ತರುವಾಯ ಈಸ್ಟ್ರೊಜಿನ್-ಪ್ರ್ರೆಜೆಸ್ಟಿರಾನುಗಳು ಸ್ತನಗಳ ಬೆಳೆವಣಿಗೆಯನ್ನು ಪ್ರಚೋದಿಸಿದ ಬಳಿಕ ಪ್ರೊಲ್ಯಾಕ್ಟಿನ್ ಕೂಡ ಪ್ರಭಾವ ಬೀರಬಹುದಾದರೂ ಸಾಮಾನ್ಯವಾಗಿ ಹೆರಿಗೆಯ ತರುವಾಯ ಹಾಲೂಡಿಕೆಗೆ ಇದು ಕಾರಣವಾಗುತ್ತದೆ. ಸ್ತನ್ಯಪಾನ ಇದರ ತಯಾರಿಕೆಗೆ ಮತ್ತಷ್ಟು ಚಾಲನೆಯನ್ನು ನೀಡುತ್ತದೆ.

	ತೈರಾಯಿಡ್ ಗ್ರಂಥಿಯ ಪ್ರಚೋದಕ : ಪಿಟ್ಯುಟರಿ ಗ್ರಂಥಿಯನ್ನು ತೆಗೆದುಹಾಕಿದಲ್ಲಿ ತೈರಾಯಿಡ್ ಗ್ರಂಥಿ ಸೊರಗಿ ಹೋಗುತ್ತದೆ. ಪಿಟ್ಯುಟರಿ ಸ್ರವಿಸುವ ಹಾರ್ಮೋನಿನ ಪ್ರಭಾವದಿಂದಾಗಿ ತೈರಾಯಿಡ್ ಗ್ರಂಥಿಯ ಕಣಗಳು ವಿಪುಲ ಬೆಳೆವಣಿಗೆಯನ್ನು ತೋರಿಸಿ ತನ್ಮೂಲಕ ತೈರಾಕ್ಸಿನ್ ಸ್ರವಿಸಿ ಉಪಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತವೆ. ರಕ್ತದಲ್ಲಿ ತೈರಾಯಿಡ್ ಗ್ರಂಥಿಯ ಹಾರ್ಮೋನಿನ ಮೊತ್ತ ಕುಗ್ಗಿದಲ್ಲಿ ಪಿಟ್ಯುಟರಿಯ ಪ್ರಚೋದಕ ಹಾರ್ಮೋನಿನ ಮೊತ್ತ ಹೆಚ್ಚುವರಿಗೊಳ್ಳುತ್ತದೆ. ತೈರಾಯಿಡ್ ಗ್ರಂಥಿಯ ಹಾರ್ಮೋನ್ ವಿಪುಲವಾಗಿದ್ದರೆ ಪಿಟ್ಯುಟರಿ ಉತ್ತೇಜಕ ಹಾರ್ಮೋನ್ ಇಳಿಯುತ್ತದೆ. ಇಂಥ ಪರಸ್ಪರ ನಿಯಂತ್ರಣ ನಿಯಮ ಅಡ್ರಿನಲ್ ಮತ್ತು ಲೈಂಗಿಕ ಗ್ರಂಥಿಗಳ ಹಾರ್ಮೋನುಗಳಿಗೂ ಅನ್ವಯಿಸುತ್ತದೆ. ಮೇಲಾಗಿ ತೈರಾಯಿಡ್ ವಿಷಮ ಸ್ಥಿತಿಯಲ್ಲಿ ಮೆಡ್ಡಗಣ್ಣನ್ನು ಉಂಟುಮಾಡುವ ಹಾರ್ಮೋನನ್ನು ಈ ಗ್ರಂಥಿ ಸ್ರವಿಸುತ್ತದೆ.

	ಅಡ್ರಿನಲ್ ಗ್ರಂಥಿಯ ತೊಗಟೆಯ ರಸಸ್ರಾವದ ಪ್ರಚೋದಕ : ಇದು ಅಡ್ರಿನಲ್ ಗ್ರಂಥಿಯ ತೊಗಟೆ ಕಣಗಳ ವಿಪುಲ ಬೆಳೆವಣಿಗೆಗೆ ಕಾರಣವಾಗಿ ಕಾರ್ಟಿಕೊಸ್ಟಿರಾಯಿಡ್ ರಸಸ್ರಾವವನ್ನು ಉಂಟುಮಾಡುತ್ತದೆ. ಬದುಕಿನ ಎಲ್ಲ ಚಟುವಟಿಕೆಗಳಿಗೆ ಇದು ಸಹಾಯಕವಾಗಿ ಯಾವುದೇ ಒತ್ತಡದ ಪರಿಸ್ಥಿತಿಯನ್ನೂ ಪರಿಣಾಮಕಾರಿಯಾಗಿ ಎದುರಿಸಬಲ್ಲದು. 

	ಹಿಂಬದಿಯ ಪಿಟ್ಯುಟರಿ : ಹೈಪೊಥಲಾಮಸ್ ಸ್ರವಿಸುವ ಎರಡು ಹಾರ್ಮೋನುಗಳ ನರತಂತುಗಳ ಮೂಲಕ ಸಾಗಿಬಂದು ಹಿಂಬದಿಯ ಹಾಲೆಯಲ್ಲಿ ಸಂಗ್ರಹಿಸಿ ಕಾಲಕಾಲಕ್ಕೆ ಬಿಡುಗಡೆ ಹೊಂದುತ್ತವೆ. ಆ ಹಾರ್ಮೋನುಗಳೇ ಆಕ್ಸಿಟೋಸಿನ್ (ಪಿಟೋಸಿನ್) ಮತ್ತು ವಾಸೊಪ್ರೆಸಿನ್ (ಎ.ಡಿ.ಎಚ್.) ರಸಸ್ರಾವದಲ್ಲಿ ಹಿಂಬದಿಯ ಹಾಲೆ ಸಕ್ರಿಯವಾಗಿ ಭಾಗವಹಿಸದೆ ಕೇವಲ ಸಂಗ್ರಹಕೋಶವಾಗಿ ಮಾತ್ರ ಕಾರ್ಯ ಮಾಡುತ್ತದೆ. ನರತಂತುಗಳ ಸಂಗ್ರಹದ ಈ ಹಾಲೆ ರಕ್ತನಾಳಕ್ಕೆ ಸಮೀಪ ಸಂಪರ್ಕವನ್ನು ಹೊಂದಿದೆ.

	ಆಕ್ಸಿಟೋಸಿನ್ : ಈ ಹಾರ್ಮೋನ್ ಹೆರಿಗೆಯ ಕಾಲದಲ್ಲಿ ಗರ್ಭಕೋಶದ ಸಂಕೋಚನವನ್ನು ಉತ್ತೇಜಿಸುತ್ತದೆ. ಮಾಸು ಹೊರಬೀಳುವುದಕ್ಕೆ ಇದು ಸಹಾಯಕ. ಹಾಲೂಡಿಕೆಯ ಕಾಲದಲ್ಲಿ ಸ್ತನಾಗ್ರದಿಂದ ಹಾಲು ಹೊಮ್ಮಲು ಉತ್ತೇಜನ ನೀಡುತ್ತದೆ. 

	ವಾಸೊಪ್ರೆಸಿನ್ : ಇದು ಮೂತ್ರಜನಕಾಂಗ ಹೊರಹಾಕುವ ಮೂತ್ರದ ಪರಿಣಾಮವನ್ನು ನಿಯಂತ್ರಿಸುತ್ತದೆ. ನಿರಂತರವಾಗಿ ಇದು ದೇಹದಲ್ಲಿ ಸ್ರವಿಸಿ ನೀರಿನ ಸಹಜ ಸಮತೋಲನವನ್ನು ಕಾಯ್ದಿರಿಸುತ್ತದೆ. ಮೂತ್ರ ಪಿಂಡದೊಳಗಿನ ಅಂತ್ಯ ಸುರಳಿ ನಾಳ ಮತ್ತು ಸಂಗ್ರಹನಾಳದ ಮೇಲೆ ಇದರ ಪ್ರಭಾವವಿದೆ. ಇದರಿಂದಾಗಿ ಶೋಧಿಸಲ್ಪಟ್ಟ ವಿಪುಲ ಮೊತ್ತದ ದ್ರವ ಒಳಹೀರಲ್ಪಟ್ಟು, ಒಂದೂವರೆ ಲೀಟರಿನಷ್ಟು ಮೂತ್ರವನ್ನು ಮಾತ್ರ ಹೊರಹಾಕುತ್ತದೆ. ದೇಹದಲ್ಲಿ ನೀರಿಳಿಕೆಯಾದ ಪಕ್ಷ ಈ ಹಾರ್ಮೋನಿನ ಸ್ರಾವ ಹೆಚ್ಚುತ್ತದೆ. ಆಗ ಹಿಂದಣ ಹಾಲೆಯಲ್ಲಿಯ ಹಾರ್ಮೋನ್ ಕರಗಿ ಹೋಗುತ್ತದೆ. ಅನಂತರ ಒಂದೆರಡು ದಿವಸಗಳಲ್ಲಿ ನೀರಿನ ಸಮತೋಲನ ಉಂಟಾದ ಬಳಿಕ ಮತ್ತೆ ಅದು ಸಂಗ್ರಹಿಸಲ್ಪಡುತ್ತದೆ. ಈ ಹಾರ್ಮೋನಿನ ಅಭಾವ ಉಂಟಾದಲ್ಲಿ ಆಗ ವಿಪುಲ ಮೊತ್ತದಲ್ಲಿ ಮೂತ್ರ ವಿಸರ್ಜನೆ ಪರಿಣಮಿಸುತ್ತದೆ.

	ಪಿಟ್ಯುಟರಿ ಗ್ರಂಥಿಯ ರೋಗಗಳು : ಪಿಟ್ಯುಟರಿ ಗಾಯಗಳು ಅಪರೂಪ. ಈ ಗ್ರಂಥಿಯಲ್ಲಿ ಅಥವಾ ಇದರ ಪರಿಸರದಲ್ಲಿ ಅಕಾರಣ ಬೆಳೆವಣಿಗೆ (ಗಂತಿ) ಉಂಟಾದಾಗ ಪಿಟ್ಯುಟರಿ ಕಾರ್ಯ ವ್ಯತ್ಯಯಗೊಳ್ಳುತ್ತದೆ. ಗಂತಿಗಳು ಮುಂದಣ ಹಾಲೆಯಲ್ಲಿ ಗೋಚರಿಸುತ್ತವೆಯೇ ವಿನಾ ಎಂದೂ ಹಾಲೆಯಲ್ಲಲ್ಲ. ಹಿಂದಣ ಹಾಲೆ ನಾಶ ಹೊಂದಬಹುದಲ್ಲದೆ ಅದರ ಸಂಪರ್ಕನರಗಳು ಭಂಗಗೊಳ್ಳಬಹುದು. ಬೆಳೆದ ಗಂತಿಗಳ ಗಾತ್ರ ಮತ್ತು ಇವನ್ನು ಅವಲಂಬಿಸಿ ಬೇರೆ ಬೇರೆ ದೈಹಿಕ ಪರಿಣಾಮಗಳು ಗೋಚರಿಸುತ್ತವೆ. ಕಣ್ಣನರದ ಮೇಲೆ ಒತ್ತಿ ದೃಷ್ಟಿಯನ್ನು ಕುಂದಿಸಬಹುದು : ಕಪಾಲದ ಮೂಳೆಯನ್ನು ತೆಳುವಾಗಿಸಬಹುದು. ಮುಂದಣ ಹಾಲೆ ಎಳೆತನದಲ್ಲಿ ಮೂಳೆಯ ತುದಿಗಳು ಕೂಡಿಕೊಳ್ಳುವ ಮುನ್ನ ವಿಪುಲವಾಗಿ ಬೆಳೆವಣಿಗೆಯ ಹಾರ್ಮೋನನ್ನು ಹೊರಹಾಕಿ ರಾಕ್ಷಸ ಬೆಳೆವಣಿಗೆಯನ್ನು ಉಂಟುಮಾಡಬಹುದು. ಉದ್ದ ಮೂಳೆಗಳು ಮಿತಿಮೀರಿ ಬೆಳೆದು ವ್ಯಕ್ತಿ ಬಲು ಎತ್ತರವಾಗಿ ಬೆಳೆಯುತ್ತಾನೆ. ಕೈಕಾಲುಗಳು ನೀಳವಾಗಿರುತ್ತವೆ. ಮಾನಸಿಕ ಬೆಳೆವಣಿಗೆ ನಿಧಾನಗೊಳ್ಳುತ್ತದೆ. ಈ ಹಾರ್ಮೋನ್ ವಯಸ್ಕರಲ್ಲಿ ವಿಪುಲ ಮೊತ್ತದಲ್ಲಿ ಸ್ರವಿಸಲ್ಪಟ್ಟರೆ, ಮೂಳೆಗಳು ಗಾತ್ರದಲ್ಲಿ ದೊಡ್ಡವಾಗುತ್ತವೆ. ಉದ್ದದ ಹೆಚ್ಚಳ ಆಗ ಉಂಟಾಗುವುದಿಲ್ಲ. ಆಂತರಿಕಾಂಗಗಳು ದೊಡ್ಡವಾಗಿ ಬೆಳೆಯುತ್ತವೆ. ಕೆಳದವಡೆ ಅಗಲವಾಗುತ್ತದೆ. ತುಟಿ, ಮೂಗು, ಕಿವಿ ದೊಡ್ಡವಾಗುತ್ತವೆ. ಮುಖದ ಚರ್ಮ ದಪ್ಪಗಾಗುತ್ತದೆ. ಹಲ್ಲುಗಳು ಬೇರ್ಪಡುತ್ತವೆ. ಕೈಕಾಲ ಮೇಲಿನ ಚರ್ಮ ದಪ್ಪಗಾಗಿ ಆ ಅಂಗಗಳು ಗಾತ್ರದಲ್ಲಿ ದೊಡ್ಡವಾಗುತ್ತವೆ. ಧ್ವನಿ ಒರಟಾಗುತ್ತದೆ. ಸ್ತ್ರೀಯರಲ್ಲಿ ಮುಟ್ಟು ನಿಲುಗಡೆಯಾಗುತ್ತದೆ. ಈ ತೆರೆನಾದ ಬೆಳೆವಣಿಗೆ ಆಮ್ಲದೊಲವಿನ ಕಣಗಳ ಗಂತಿಯಿಂದ ಉದ್ಭವಿಸುತ್ತದೆ. ಪ್ರತ್ಯಾಮ್ಲದೊಲವಿನ ಕಣಗಳ ಗಂತಿಯಿಂದ ಕಫಿಂಗನ ಲಕ್ಷಣಕೂಟ ಗೋಚರಿಸುತ್ತದೆ. ಅಡ್ರಿನಲ್ ಗ್ರಂಥಿಯ ತೊಗಟೆಯ ಸ್ರಾವ ಹೆಚ್ಚುತ್ತದೆ. ಇದರ ಫಲವಾಗಿ ಮುಂಡ ಮತ್ತು ಕತ್ತಿನ ಭಾಗದಲ್ಲಿ ವಿಪುಲವಾಗಿ ಕೊಬ್ಬು ಸಂಗ್ರಹವಾಗುತ್ತದೆ; ಚರ್ಮದಲ್ಲಿ ಕೆನ್ನೀಲಿ ಗೆರೆಗಳು ಗೋಚರಿಸುತ್ತವೆ. ರಕ್ತದ ಒತ್ತಡ ಹೆಚ್ಚುತ್ತದೆ. ಮೂಳೆ ಅಭದ್ರಗೊಳ್ಳುತ್ತದೆ. ಮಧುಮೇಹ ಗೋಚರಿಸಬಹುದು. ಮುಂದಣ ಹಾಲೆಯ ಸ್ರಾವ ಇಳಿಮುಖವಾದಲ್ಲಿ ದೈಹಿಕ ಬೆಳೆವಣಿಗೆ ಮತ್ತ ಉಪಾಪಚಯ ಕ್ರಿಯೆ ಕುಗ್ಗುತ್ತವೆ. ಬೆಳೆವಣಿಗೆಯ ಹಾರ್ಮೋನಿನ ಅಭಾವದಿಂದ ವ್ಯಕ್ತಿ ಕುಳ್ಳನಾಗುತ್ತಾನೆ; ಲೈಂಗಿಕ ಹಾರ್ಮೋನುಗಳ ಅಭಾವ ಜೊತೆಯಲ್ಲಿದ್ದರೆ ಲೈಂಗಿಕ ಗ್ರಂಥಿಯ ಬೆಳೆವಣಿಗೆ ಕುಗ್ಗುತ್ತದೆ. 

	ಮುಂದಣ ಹಾಲೆ ಸಂಪೂರ್ಣನಾಶ ಹೊಂದಿದಲ್ಲಿ ಸುಸ್ತು, ಲೈಂಗಿಕ ಕಾರ್ಯದ ನಿಲುಗಡೆ, ತೈರಾಯಿಡ್ ಗ್ರಂಥಿ ಮತ್ತು ಅಡ್ರಿನಲ್ ಗ್ರಂಥಿಯ ರಸಸ್ರಾವದ ಕೊರತೆ ಗೋಚರಿಸುತ್ತವೆ. ಸೈಮಂಡನ ರೋಗವೆಂದು ಕರೆಯುವ ಈ ಸ್ಥಿತಿ ಬಾಣಂತಿತನದ ನಂಜಿನಿಂದ ತಲೆದೋರಬಹುದಾಗಿದೆ. ಅದರಿಂದಾಗಿ ಹಾಲೂಡಿಕೆ ನಿಲುಗಡೆಯಾಗುತ್ತದೆ; ಮುಟ್ಟು ಪ್ರಾರಂಭವಾಗುವುದಿಲ್ಲ. ಲೈಂಗಿಕ ಇಚ್ಛೆ ಕಡಿಮೆ ಆಗುತ್ತದೆ. ಲೈಂಗಿಕ ಲಕ್ಪ್ಷಣಗಳು ಸೊರಗುತ್ತವೆ. ಗಂಡಸರಲ್ಲಿ ಷಂಡತನವುಂಟಾಗುತ್ತದೆ. ವ್ಯಕ್ತಿ ಬಿಳುಚಿಕೊಳ್ಳುತ್ತಾನೆ. ರಕ್ತದ ಒತ್ತಡ ಇಳಿಯುತ್ತದೆ. ಹೈಪೊಥಲಾಮಸ್ ರೋಗದಿಂದ ದೇಹ ಬೊಜ್ಜಿನಿಂದ ಕೂಡಿ ಸ್ಥೂಲವಾಗುತ್ತದೆ. ಲೈಂಗಿಕ ಗ್ರಂಥಿಗಳ ಬೆಳೆವಣಿಗೆ ಕುಗ್ಗುತ್ತದೆ. (ಫ್ರಾಲಿಕನ ಲಕ್ಷಣಕೂಟ). ಹಿಂದಣ ಹಾಲೆ ಮತ್ತು ಹೈಪೊಥಲಾಮಸ್ ಸಂಪರ್ಕ ಭಂಗವಾದಲ್ಲಿ ವ್ಯಕ್ತಿಯಲ್ಲಿ ಬಹುಮೂತ್ರ ನಿರೋಧಕ ಹಾರ್ಮೋನಿನ ಅಭಾವ ಉಂಟಾಗುತ್ತದೆ. ಆಗ ವ್ಯಕ್ತಿ ಡಯಾಬಿಟಿಸ್ ಇನ್‍ಸಿಪಡಸ್ ಎಂಬ ರೋಗಕ್ಕೆ ತುತ್ತಾಗುವುದಿದೆ. ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಮೂತ್ರದ ಸಾಪೇಕ್ಷ ಸಾಂದ್ರತೆ ತುಂಬಾ ಕೆಳಕ್ಕಿಳಿಯುತ್ತದೆ, ಹೆಚ್ಚು ಬಾಯಾರಿಕೆಯಿಂದ ಪದೇ ಪದೇ ನೀರು ಕುಡಿಯಬೇಕಾಗುತ್ತದೆ. ಚರ್ಮ, ನಾಲಿಗೆ ಒಣಗುತ್ತವೆ, ಜೊಲ್ಲು, ಬೆವರು ಕಡಿಮೆಯಾಗುತ್ತವೆ.
 
(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ